ನಿಯತಿ ತತ್ತ್ವ-
	ಮಾನವ ಪೂರ್ಣ ಸ್ವತಂತ್ರನಲ್ಲ. ಅವನ ಜೀವನದ ಆಗುಹೋಗುಗಳೆಲ್ಲ ಯಾವುದೋ ಒಂದು ಪರವಸ್ತುವಿನಿಂದ ಮೊದಲೇ ನಿಯಂತ್ರಿತವಾಗಿರುತ್ತವೆ. ಹಾಗೇ ನಿಯಂತ್ರಣ ಮಾಡುವ ಪರವಸ್ತುವೇ ನಿಯತಿ. ನಿಯತಿ ಶಬ್ದ ದರ್ಶನಪ್ರಪಂಚದಲ್ಲಿ ಒಂದು ವಿಶಿಷ್ಟ ತತ್ತ್ವ ನಿಷ್ಠೆಯ ಸ್ವರೂಪವನ್ನು ಪ್ರತಿಪಾದಿಸುತ್ತದೆ. ಚೇತನ ವರ್ಗದಲ್ಲಿ ಈ ತತ್ತ್ವದ ಮಹತ್ವವನ್ನು ಹೆಚ್ಚಾಗಿ ಕಾಣಬಹುದು. ಜಡಪ್ರಪಂಚದಲ್ಲಿ ಕಂಡುಬರುವ ಆಗುಹೋಗುಗಳಲ್ಲಿ ತೀರ ಕ್ಲುಪ್ತ. ವಾತಾವರಣಕ್ಕೆ ಅನುಗುಣವಾಗಿ ಎಲ್ಲ ಪದಾರ್ಥಗಳೂ ವರ್ತಿಸುತ್ತವೆ. ಅದಕ್ಕೆ ವಿರೋಧವಾಗಿ ಯಾವ ರೀತಿಯಲ್ಲೂ ಅವು ಇರಲಾರವು.

	ಆದರೆ ಚೇತನ ವರ್ಗದಲ್ಲಿ ಚೈತನ್ಯದ ಪರಿಣಾಮವಾದ ನೂತನ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ವಾತಾವರಣದಕ್ಕೆ ತಲೆಬಾಗಿ ಅಚೇತನದಂತೆಯೇ ಇರಲು ಚೇತನ ವರ್ಗಕ್ಕೆ ಆಗುವುದಿಲ್ಲ. ಅದು ವಾತಾವರಣವನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಲು ಆಶಿಸುತ್ತದೆ. ಚೇತನಾಚೇತನ ವರ್ಗಗಳು ಕಲೆಯದೆ ಪ್ರತ್ಯೇಕವಾಗಿದ್ದರೆ, ಈ ವಿಚಾರಕ್ಕೆ ಪ್ರಸಕ್ತಿಯೇ ಇರುತ್ತಿರಲಿಲ್ಲ. ಚೈತನ್ಯವೆಂಬ ವಿಶೇಷವಾದ ಧರ್ಮ ಚೇತನ ಸಾಮನ್ಯಕ್ಕೆ ಅಸಾಧಾರಣವಾದ್ದರಿಂದ ಅದರ ಫಲವಾದ ಇಚ್ಛಾ ಪ್ರವೃತ್ತಿ ಮತ್ತು ಫಲಗಳನ್ನು ಅನುಭವಿಸಬೇಕಾದ ಅವಕಾಶವುಂಟು. ಪ್ರತಿಯೊಬ್ಬ ಚೇತನನೂ ತನ್ನ ಇಷ್ಟಾನುಸಾರ ಅಪರಿಮಿತವಾದ ಫಲವನ್ನು ಅನುಭಾವಿಸಲು ಸಂಕಲ್ಪಿಸುತ್ತಾನೆ. ಆದರೆ ಅದಕ್ಕೆ ಭಂಗ ಬರುವುದೂ ಉಂಟು. ಅನಿರೀಕ್ಷಿತವಾದ ಅಪೇಕ್ಷಿತ ಸಿದ್ಧಿ ಅಥವಾ ಅನಪೇಕ್ಷಿತ ಪ್ರಾಪ್ತಿ ಅಷ್ಟೇ ಅಲ್ಲದೇ ಅಲಾಭ ಅನಿಷ್ಟ ಪ್ರಾಪ್ತಿ ಉಂಟಾಗುವುದು ಅಸಹ್ಯ ಹಾಗೂ ವಿಸ್ಮಯಕರ.

	ಚೇತನ ವಸ್ತು ತನ್ನ ಇಚ್ಛೆಯನ್ನು ಪೂರ್ಣವಾಗಿ ಬಳಸಲು ಅವಕಾಶ ನೀಡದ ಯಾವುದೋ ಒಂದು ಪರಮಾರ್ಥವಿದೆ.  ಅದು ಚೇತನ ವಸ್ತುವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸ್ವಾತಂತ್ರ್ಯಕ್ಕೆ ಎಡೆಗೊಡುವುದಿಲ್ಲ. ಆ ವಸ್ತುವಿಗೆ ಮೊದಲಿಂದ ಕೊನೆಯವರೆಗೂ ಆಗಬಹುದಾದುದೆಲ್ಲ ಮೊದಲೇ ವ್ಯವಸ್ಥಿತವಾಗಿದ್ದು ಯಾವ ಬದಲಾವಣೆಗೂ ಅವಕಾಶವಿರುವುದಿಲ್ಲ. ಭವಿಷ್ಯವೂ ಭೂತದಲ್ಲಿ ಅವಿಚಾಲ್ಯವಾಗಿ ಅಡಕಗೊಂಡಿರುತ್ತದೆ. ಇದೇ ನಿಯತಿ ತತ್ತ್ವದ ಸಾರ.
(ವಿ.ಟಿ.ಟಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ